Thursday, May 28, 2009

ಶುಭ ಹಾರೈಕೆ

ಕೇಂದ್ರದಲ್ಲಿ ಹೊಸ ಸರಕಾರ-ಮಂತ್ರಿಮಂಡಲ ರಚನೆಯಾಗಿದೆ.ಮುಂದಿನ ಐದು ವರ್ಷಗಳಿಗೆ ನೆಮ್ಮದಿಯಾಗಿರುವಂತಹ ಕೆಲಸಗಳನ್ನು ಮಾಡಲಿ ಎಂಬುದು ಜನಸಾಮಾನ್ಯರ ಹಾರೈಕೆ.ಹೊಸ ಸರಕಾರಕ್ಕೆ ಮತ್ತು ಮಂತ್ರಿಗಳಿಗೆ ನಮ್ಮ ಮನವಿ:

ಅಧಿಕಾರದಲ್ಲಿದ್ದಾಗ
ಭ್ರಷ್ಟಾಚಾರ
ಮಾಡಿಕೊಳ್ಳಬೇಡಿ
ಆರಿಸಿದ ಜನರಿಗೆ
ಮೋಸ ಮಾಡಿ-
ಕೊಲ್ಲಬೇಡಿ.

ಅಧಿಕಾರ ಎಂದರೆ,ಚುನಾವಣೆಯಲ್ಲಿ ಖರ್ಚುಮಾಡಿದ ಹಣವನ್ನು ವಾಪಸ್ ಸಂಪಾದಿಸಲು ಇರುವ ಅವಕಾಶ ಅಂತ ಭಾವಿಸಿದರೆ ಅದು ಅಕ್ಷಮ್ಯ. ನೀವೇ ದೇವರೆಂದು ಮತದಾರರ ಮುಂದೆ ನಾನಾ ಬಣ್ಣದ ಮಾತುಗಳನ್ನಾಡಿ ಆಮೇಲೆ ಕೈಕೊಡುವುದು ಒಳ್ಳೆಯದಲ್ಲ.ಅವಕಾಶವಾದಿ ಪ್ರೇಮಿಯಂತೆ ಆಗಬಾರದಲ್ಲ?

ಮೊದಲು
'ನೀನೆ ಸರ್ವಸ್ವ'
ಎಂದ ನಲ್ಲ
ಶ್ರೀಮಂತೆ ಒಬ್ಬಳು
ಸಿಕ್ಕಿದಾಗ
'ನೀನ್ಯಾರೋ ಗೊತ್ತಿಲ್ಲ '
ಎಂದನಲ್ಲ!

ಲೋಕಾಯುಕ್ತರ ದಾಳಿಯಾದಾಗ ಜನಸಾಮಾನ್ಯರಿಗೆ ಒಮ್ಮೆ ಖುಷಿಯಾಯಿತು. ಆದರು ಮನದೊಳಗೆ ಪ್ರಶ್ನೆ ಬಂದದ್ದು ಹೀಗೆ:

ಸಿಕ್ಕಿಬಿದ್ದವರಿಷ್ಟೇ;
ಉಳಿದವರು ಎಷ್ಟೋ?
ಬಯಲಾದ ಅಕ್ರಮ
ಕೆಲವೇ ಕೋಟಿಗಳಂತೆ
ತಿಳಿಯದಿರುವುದು
ಇನ್ನೆಷ್ಟು ಕಂತೆ?

ದಿಲ್ಲಿಯಿಂದ ಹಳ್ಳಿ ಬಹುದೂರ ದಾರಿ
ಮಧ್ಯದಲ್ಲಿಯೇ ಹಣ ಹೋಗುವುದು ಸೋರಿ
ಹಾದಿಯಲ್ಲಿಯ ಸೋರಿಕೆಯ ತಡೆಯಬೇಕು
ಇರುವ ಸಂಪತ್ತುಗಳೇ ನಮಗೆ ಸಾಕು.

Wednesday, May 27, 2009

ಮೊದಲ ಮಾತು

ಬ್ಲಾಗೆಂದರೆ
ನಮಗನಿಸಿದ್ದನ್ನು
ನಮಗನಿಸಿದಂತೆ
ಬರೆವ ತಾಣ.
ಸಂಪಾದಕರ
ಹಂಗಿಲ್ಲದೆ ಪ್ರಕಟಿಸಬಹುದಾದ
ಕಾರಣ!

ಹಾಗೆ ಸುಮ್ಮನೆ ಮನಸಿಗನಿಸಿದ್ದನ್ನು,ಮನಸ್ಸನ್ನು ತಟ್ಟಿದ್ದನ್ನು ಬರೆಯಬೇಕೆನಿಸಿತ್ತು. ಎಲ್ಲೋ ಮನದೊಳಗೆ ಉಂಟಾದ ಕಂಪನವನ್ನು ಇತರರಿಗೂ ತಿಳಿಸುವುದು ಉದ್ದೇಶ.

ನಿಯಮಿತವಾಗಿ
ಎಲ್ಲ ತರಗತಿಗಳಲ್ಲೂ
ನಾನಿದ್ದೆ.
ಪಾಠ ಕೇಳುವ ಬದಲು
ಮಾಡುವೆ ನಾ ನಿದ್ದೆ!

ಮೊದಲಿನಿಂದಲೂ ಸೀರಿಯಸ್ಸಾಗಿ ಕುಳಿತೆ ಅಭ್ಯಾಸ. ತಂಟೆ-ತರಲೆ ನನಗೆ ಹೇಳಿ ಮಾಡಿಸಿದ್ದಲ್ಲ. ಈಗಲಾದರೂ ಸ್ವಲ್ಪ ತರಲೆ ಮಾಡೋಣ ಅಂತ ಅನಿಸಿತು.

ನೋಡದಿದ್ದರೆ
ನಿನ್ನ
ಆ ಗಲ್ಲ
ನನ್ನ ಎದೆಗೆ
ಸಮಾಧಾನ
ಆಗಲ್ಲ
-ಹೀಗಂತ ಕನಸು ಕಂಡಿದ್ದರೆ ಅದು ನನ್ನ ತಪ್ಪಲ್ಲ.

ಅದಲು ಬದಲಾಗಿವೆ
ನನ್ನ-ಅವಳ
ಮನಸ್ಸು
ಸಹಜ ಬಿಡಿ
ನಮ್ಮದು
ಅಂತಹ ವಯಸ್ಸು!

ಆ ಕಾಲದಲ್ಲಿ ಮಾತುಕತೆ ಕಡಿಮೆಯಿದ್ದರೂ, ಈಗ ಹಾಗಿಲ್ಲ. ಸಹಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ!